ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ಸಣ್ಣಾಟ: ಸಣ್ಣಗೆ ಮಳೆ ಹನಿಯುವಾಗ ಯಕ್ಷರು ಮನೆಗೆ ಬಂದರು

ಲೇಖಕರು :
ಲಕ್ಷ್ಮಿ ಮಚ್ಚಿನ
ಸೋಮವಾರ, ಜನವರಿ 1 , 1

ಜಿಟಿಜಿಟಿ ಮಳೆ ಹಿಡಿದರೆ ಯಕ್ಷಗಾನ ಮಂದಿಗೆ ಸ್ವಲ್ಪ ಆತಂಕ. ಎಂಬಲ್ಲಿಗೆ ಯಕ್ಷಗಾನಕ್ಕೆ ಸಂಪೂರ್ಣ ರಜೆ ಎಂದೇ ಅರ್ಥ. ಸ್ಟಾರ್‌ ಕಲಾವಿದರಿಗೆ ಮಳೆ ಇಲ್ಲದ ಕಡೆ ಬೇಡಿಕೆ ಇರಬಹುದು. ಆದರೆ ಮಿಕ್ಕ ಚಿಕ್ಕಪುಟ್ಟ ಕಲಾವಿದರು ಏನು ಮಾಡಬೇಕು? ಉಜಿರೆ, ಬೆಳ್ತಂಗಡಿ ಕಡೆ ಮನೆ, ಮನೆಗೆ ಹೋಗಿ ಪುಟ್ಟ ಪ್ರಸಂಗ ಮಾಡಿ 'ಆಟ' ಮುಗಿಸುತ್ತಾರೆ. ಇದೇನಿದು ಚಿಕ್ಕಮೇಳ?

ಮಾರುತಿ ಓಮ್ನಿಯಲ್ಲಿ ಆಗಮನ. ಸಂಖ್ಯೆ ಐದನ್ನು ಮೀರದು. ಜಡಿ ಮಳೆ ಇರಲಿ, ಬಿರುಗಾಳಿ ಇರಲಿ. ಸರಸರನೆ ಮನೆಯೊಳಗೆ ಬರುತ್ತಾರೆ. ದೇವರ ಚಿತ್ರ ಇಟ್ಟು ಪೂಜೆಗೆ ಅಣಿಯಾಗುತ್ತಾರೆ. ಪುರುಷ ಹಾಗೂ ಸ್ತ್ರೀ ವೇಷ ಇರುತ್ತದೆ. ಒಬ್ಬರು ಭಾಗವತರು. ಒಬ್ಬರು ಮದ್ದಳೆಯವರು. ಮನೆಯವರು ಒಟ್ಟು ಸೇರಿದ ಕೂಡಲೇ 'ರತಿಯು ಮನ್ಮಥನ ಕರೆದು . . .' ಎಂದು ಭಾಗವತರು ಹಾಡುತ್ತಾರೆ. ಒಟ್ಟು 10 ನಿಮಿಷದ ಕಾರ್ಯಕ್ರಮ. ಮನೆಯವರು ಕೊಟ್ಟ ಕಾಣಿಕೆ ಪಡೆದು ನೆರೆ ಮನೆಗೆ ಪಯಣ. ಇದು ಮಳೆಗಾಲದಲ್ಲಿ ಈಗ ಕಂಡು ಬರುವ ಚಿಕ್ಕಮೇಳದ ಪಯಣ.

ಮಳೆಗಾಲದಲ್ಲಿ

ಯಕ್ಷಗಾನ ವೃತ್ತಿ ಕಲಾವಿದರಿಗೆ ಈಗ ಮಳೆಗಾಲದ ರಜೆ. ತಾರಾ ಮೌಲ್ಯ ಹೊಂದಿರುವ ಕೆಲವು ಕಲಾವಿದರಿಗೆ ಮಳೆಗಾಲದಲ್ಲೂ ಬೇಡಿಕೆಯಿದ್ದು ಬೆಂಗಳೂರು, ಮುಂಬಯಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಉಳಿದಂತೆ ಕಲಾವಿದರು ಬೇರೆ ಬೇರೆ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಾರೆ. ಮಳೆಗಾಲದ ಅವಧಿಯಲ್ಲಿ ಸಂಬಳ ಇಲ್ಲದ ಕಾರಣ ಬೇಸಗೆಯ ಸಂಬಳ ವರ್ಷಪೂರ್ತಿಗೆ ಸಾಕಾಗದ ಕಾರಣ ಪರ್ಯಾಯ ಉದ್ಯೋಗ ಅನಿವಾರ್ಯ. ಆದರೆ ಕೆಲವು ಕಡೆ ದೀಪಾವಳಿವರೆಗೆ ಮೂರು ತಿಂಗಳ ಪರ್ಯಂತ ಕರಾವಳಿ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಹಿಮ್ಮೇಳ, ವೇಷ ಭೂಷಣದೊಂದಿಗೆ ಪ್ರದರ್ಶನ ನೀಡುವ ಪರಿಪಾಠ ಇದೆ. ಇದನ್ನು ಚಿಕ್ಕ ಮೇಳ ಎಂದು ಕರೆಯಲಾಗುತ್ತದೆ.

ಪೂಜೆ ಮಾಡಿ ಪರ್ಯಟನೆ

ಸಾಮಾನ್ಯವಾಗಿ ಈ ಚಿಕ್ಕಮೇಳದವರು ಯಾವುದಾದರೂ ದೇವಸ್ಥಾನದಲ್ಲಿ ಪೂಜೆ ನಡೆಸಿ ತಿರುಗಾಟ ನಡೆಸುತ್ತಾರೆ. ಪ್ರತಿ ಮನೆಯಲ್ಲೂ ಪೂಜೆ ನಡೆಸಿ ಪೌರಾಣಿಕ ಕಥಾನಕದ ಭಾಗ ಪ್ರದರ್ಶಿಸುತ್ತಾರೆ. ಯಕ್ಷಗಾನ ಕಲಾವಿದರಿಗೆ ಇದು ಬಿಡುವಿನ ಸಮಯವಾಗಿದ್ದು ರಸಿಕರಿಗೆ ಮನೆಯಲ್ಲಿಯೇ ಯಕ್ಷಗಾನ ಸವಿಯುವ ಭಾಗ್ಯ. 10 ನಿಮಿಷದಲ್ಲಿ ಪ್ರಸಂಗವೊಂದರ ಪುಟ್ಟ ಕಥಾಭಾಗವನ್ನು ಆಡಿ ತೋರಿಸುತ್ತಾರೆ. ಉತ್ತಮ ಕಂಠಸಿರಿಯ ಭಾಗವತರು, ಚೌಕಾಶಿಯಿಲ್ಲದೇ ಅಭಿನಯಿಸುವ ಕಲಾವಿದರು. ಮನೆ ಮಂದಿಗೆ ಮುದ ನೀಡುತ್ತಾರೆ.

ಹರಕೆಯಂತೆಯೇ

ವಿದ್ಯೆ, ಬುದ್ಧಿ, ಕೀರ್ತಿ, ಕೃಷಿ, ವ್ಯಾಪಾರ, ಮದುವೆ ಹೀಗೆ ವಿವಿಧ ಕಾರ್ಯಸಿದ್ಧಿಗಳಿಗಾಗಿ ಚಿಕ್ಕ ಮೇಳದ ಸೇವೆ ನಡೆಯುತ್ತದೆ. ಒಂದು ನಿರ್ದಿಷ್ಟ ದೇವಸ್ಥಾನದ ಹೆಸರಿನಲ್ಲಿ ಈ ಚಿಕ್ಕ ಮೇಳ ತಿರುಗಾಟ ನಡೆಸುತ್ತದೆ. ನಶಿಸುತ್ತಿರುವ ಯಕ್ಷಗಾನ ಕಲೆಗೆ 'ಚಿಕ್ಕ ಮೇಳ' ಪ್ರೋತ್ಸಾಹಕವಾಗಿದೆ. ಮಾತ್ರವಲ್ಲ ಸುಮಾರು ನಲ್ವತ್ತು ವರ್ಷಗಳ ಹಿಂದೆ ಜೀವಂತವಾಗಿದ್ದ ಈ ಕಲೆ ಇದೀಗ ಕೆಲವು ಕಡೆ ಮಾತ್ರ ಕಂಡಿಬರುತ್ತಿದೆ. ಉಜಿರೆ ಹಾಗೂ ಬೆಳ್ತಂಗಡಿಯಲ್ಲಿ ಚಿಕ್ಕಮೇಳದ ಅಸ್ತಿತ್ವ ಇದೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಹಾಗೂ ಲಾೖಲ ದುರ್ಗಾಪರಮೇಶ್ವರಿ ಕಲಾಸಂಘ ಓಡದಕರಿಯದಲ್ಲಿ ಚಿಕ್ಕಮೇಳಗಳಿವೆ. ಲಾೖಲ ಮೇಳಕ್ಕೆ ಹಿರಿಯ ಯಕ್ಷಗಾನ ಕಲಾವಿದ ಜನಾರ್ದನ ಗುಡಿಗಾರ್‌ ಅವರು ಮಾರ್ಗದರ್ಶಕರು.

ಪ್ರಸಂಗಗಳು

ಭಾಗವತ, ರಾಮಾಯಣ ಪ್ರವಚನ, ಹೂವಿನ ಕೋಲು ಇದ್ದಂತೆ ಚಿಕ್ಕ ಮೇಳವೂ ಯಕ್ಷಗಾನದ ಉಳಿವಿಗೆ ಪೂರಕವಾಗಿದೆ. ರತಿ ಮನ್ಮಥನೇ ಮೊದಲಾದ ಪ್ರಸಂಗಗಳನ್ನು ಆಯ್ದುಕೊಂಡು ಪ್ರದರ್ಶಿಸಲಾಗುತ್ತದೆ. ಮನೆಯವರು ನೀಡುವ ಹಣ್ಣು ಕಾಯಿ, ಅಕ್ಕಿ, ಕಾಣಿಕೆಯೇ ಇವರ ಆದಾಯವಾಗಿದೆ. ಎರಡು ದಿನ ಮೊದಲೇ ಬಂದು ಮನೆಯವರಿಗೆ ಕರಪತ್ರ ನೀಡಿ ಅನುಮತಿ ಪಡೆದೇ ಮನೆಗಳಿಗೆ ರಾತ್ರಿ ವೇಳೆ ಬರುತ್ತಾರೆ, ಕೆಲವು ಮನೆಯವರು ಸಂತೋಷದಿಂದ ಆಹ್ವಾನಿಸಿದರೆ ಇನ್ನು ಕೆಲವರು ಮುಖ ಸಿಂಡರಿಸುವುದೂ ಇದೆ . ಮತ್ತೆ ಕೆಲವರು ಬರಲು ಹೇಳಿ ದಡಾರನೆ ಬಾಗಿಲು ಹಾಕಿ ಅವಮಾನ ಮಾಡುವುದೂ ಇದೆ. ಅದೇನೇ ಇದ್ದರೂ ಯಕ್ಷಗಾನದ ಉಳಿವಿಗೆ ಇದೊಂದು ಅಳಿಲು ಸೇವೆ. ಜತೆಗೆ ಕಲಾಪೋಷಣೆಗೆ ಪುಟ್ಟ ಅವಕಾಶವೂ ಹೌದು. ಧಾರ್ಮಿಕ ನಂಬಿಕೆಯ ಜತೆಗೆ ಕಲೆ, ಕಲಾವಿದರ ಅಸ್ತಿತ್ವ ಉಳಿಕೆಯೂ ಮುಖ್ಯ. ಹಾಗಾಗಿ ಚಿಕ್ಕಮೇಳ ಪ್ರಯೋಗ ಸ್ವಾಗತಾರ್ಹ ಅನ್ನೋ ಅಭಿಪ್ರಾಯವೂ ಇದೆ.

ಕಲೆಗೆ ಪ್ರೋತ್ಸಾಹ

ಕಲೆಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಮನೆಯೊಳಗೆ ಕಲಾಸೇವೆ ನಡೆದರೆ ಆ ಮನೆಗೆ ಶ್ರೇಯಸ್ಕರ ಎಂಬ ನಂಬಿಕೆ ನಡೆದು ಬಂದಿದೆ. ನಮ್ಮ ನೆಗೆ ಬಂದ ಚಿಕ್ಕಮೇಳ ರತಿ ಮನ್ಮಥ ಪ್ರಸಂಗವನ್ನು ಚಿಕ್ಕದಾಗಿ ಆಡಿ ತೋರಿಸಿದ್ದು ನಾವು ಆನಂದಿಸಿದ್ದೇವೆ. ಯಥೋಚಿತ ಸತ್ಕಾರ ಮಾಡಿದ್ದೇವೆ ಎನ್ನುತ್ತಾರೆ ಬೆಳ್ತಂಗಡಿಯ ಕೆ.ಜಿ. ಲಕ್ಷ್ಮಣ ಶೆಟ್ಟಿ.

ಕಲೆಯ ಆರಾದನೆ

ಕಲೆಯ ಆರಾಧನೆ ಎಂದರೆ ಅದು ಶಿವನ ಆರಾಧನೆ. ಭಾರತೀಯರಾದ ನಗೆ ದೇವರ ಪ್ರೀತಿಗೆ ಪಾತ್ರರಾಗಲು ಗಾನ, ನಾಟ್ಯ , ಕೀರ್ತನೆ ಮೊದಲಾದ ಹಲವು ದಾರಿಗಳಿವೆ. ಯಕ್ಷಗಾನ ಕಲಾ ಸೇವೆ ದೇವರಿಗೆ ಅತ್ಯಂತ ಪ್ರಿಯವಾದುದು. ದೇವಸ್ಥಾನಗಳ ಕೃಪಾಪೋಷಿತವಾಗಿ ನಡೆಯುವಂತದ್ದು ಯಕ್ಷಗಾನ. ಅದರ ಇನ್ನೊಂದು ರೂಪವೇ ಚಿಕ್ಕಮೇಳ. ತಾಳ, ಮದ್ದಳೆಗಳ ನಾದ ಮನೆಯಲ್ಲಿ ಮೊಳಗುವುದರಿಂದ ಕೆಟ್ಟ ಭೂತ, ಪ್ರೇತ, ಪಿಶಾಚಿ, ಅನಿಷ್ಟಗಳೆಲ್ಲವೂ ದೂರವಾಗುತ್ತದೆ ಎನ್ನುವುದು ಹಿರಿಯರ ನಂಬಿಕೆ ಇದೆ. ಏನೇ ಆದರೂ ಜಿಟಿ,ಜಿಟಿ ಮಳೆಯಲ್ಲೂ ಯಕ್ಷಗಾನವನ್ನು ಸವಿಯುವುದು ಸುಖವೇ ಸುಖ.



ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ